ಎಡೆಯೂರು-
	ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಎಡೆಯೂರು ಹೋಬಳಿಯ ಮುಖ್ಯ ಸ್ಥಳವಾದ ಒಂದು ಗ್ರಾಮ. ಕ್ರಿ.ಶ.15ನೆಯ ಶತಮಾನಕ್ಕೆ ಸೇರಿದ ವೀರಶೈವ ಧರ್ಮಗುರುಗಳಾದ ತೋಂಟದ ಸಿದ್ಧಲಿಂಗಸ್ವಾಮಿಗಳ ಸಮಾಧಿಸ್ಥಳವಾಗಿದ್ದು ಎಲ್ಲ ಕಾಲ ಮತ್ತು ಪ್ರದೇಶಗಳಿಂದಲೂ ಯಾತ್ರಿಕರನ್ನು ಆಕರ್ಷಿಸುತ್ತದೆ (ನೋಡಿ- ಎಡೆಯೂರು-ಸಿದ್ಧಲಿಂಗ). ಇಲ್ಲಿನ ದರ್ಶನೀಯ ಕಟ್ಟಡಗಳಲ್ಲಿ ತೋಂಟದ ಸಿದ್ಧಲಿಂಗಸ್ವಾಮಿಗಳ ಗದ್ದಿಗೆ, ವೀರಶೈವರ ಮಠ, ಚಿತ್ರಮಠ ಸುಂದರವಾದ ತಟಾಕ ಮತ್ತು ಶಿಥಿಲವಾಗಿರುವ ವರದರಾಜಸ್ವಾಮಿ ದೇವಸ್ಥಾನ ಮುಖ್ಯವಾದವು. ತಟಾಕ ನೀಳವಾದ ಕಲ್ಲುಚಪ್ಪಡಿಗಳಿಂದ ನಿರ್ಮಿತವಾಗಿ, ಅದರ ಪ್ರಾಕಾರದ ಮೇಲೆ ಅಂದವಾದ ಕೆತ್ತನೆಗಳಿವೆ. ಚಿತ್ರಮಠದ ಪ್ರಾಂಗಣ ಒಂದು ಕಾಲದಲ್ಲಿ ವರ್ಣಚಿತ್ರಗಳಿಂದ ಅಲಂಕೃತವಾಗಿದ್ದುದರಿಂದ ಆ ಹೆಸರು ಪಡೆದಿದೆ. ಸಿದ್ಧಲಿಂಗಸ್ವಾಮಿಗಳ ಪೀಳಿಗೆಗೆ ಸೇರಿದ ವೀರಶೈವ ಗುರುಗಳ ಕೇಂದ್ರವಾದ ಮತ್ತೊಂದು ಮಠ ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲೊಂದು. ದ್ರಾವಿಡ ವಾಸ್ತುಶೈಲಿಯಲ್ಲಿರುವ ಸಿದ್ಧಲಿಂಗೇಶ್ವರ ದೇವಾಲಯ ಧನಿವಾಸದ ಚೆನ್ನವೀರಪ್ಪ ಒಡೆಯರು ಎಂಬಾತನಿಂದ ನಿರ್ಮಿತವಾಗಿ ತೋಂಟದ ಸಿದ್ಧಲಿಂಗಸ್ವಾಮಿಗಳ ಗದ್ದಿಗೆ ಅಥವಾ ಸಮಾದಿಯನ್ನು ಒಳಗೊಂಡಿರುವುದರಿಂದ ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ.

	ದೇವಾಲಯದ ಮಹಾದ್ವಾರದ ಬಲಬದಿಯ ಪ್ರಾಂಗಣದಲ್ಲಿರುವ ಶಾಸನ ಧನಿವಾಸದ ಚೆನ್ನವೀರಪ್ಪ ಒಡೆಯರ್ ಈ ಮಂದಿರವನ್ನು ನಿರ್ಮಿಸಿದನೆಂದು ತಿಳಿಸುವುದಲ್ಲದೆ ಸ್ವಾಮಿಗಳ ಮಹಾತ್ಮೆಯನ್ನು ವರ್ಣಿಸುತ್ತದೆ. ಅಲ್ಲಿರುವ ಒಂದು ಶಿಲೆಯ ಲೀಲೆ ಅಂಜಲಿಬದ್ಧರಾದ ಸ್ವಾಮಿಗಳ ರೇಖಾಚಿತ್ರ, ಎಡಬದಿಯಲ್ಲಿ ಶಿವಲಿಂಗ ಮತ್ತು ಚೆನ್ನವೀರಪ್ಪ, ಆತನ ಪತ್ನಿ ಪಾರ್ವತಮ್ಮ- ಇವರ ಚಿತ್ರಗಳೂ ಕೆತ್ತಲ್ಪಟ್ಟಿವೆ. ಮುಖಮಂಟಪ ಮತ್ತು ಹಜಾರದ ಚಾವಣಿಯ ಮೇಲೆ ಸ್ವಾಮಿಗಳ ಜೀವನದ ಕೆಲವು ದೃಶ್ಯಗಳನ್ನೂ ಶಿವನ ಇಪ್ಪತ್ತೈದು ಲೀಲೆಗಳನ್ನೂ ಕನ್ನಡ ತಲೆಬರಹಗಳೊಂದಿಗೆ ಚಿತ್ರಿಸಲಾಗಿದೆ. ಗದ್ದಿಗೆಯ ಮೇಲಿನ ಬೆಳ್ಳಿಯ ಕವಚವುಳ್ಳ ವಿಭೂತಿ ಲಿಂಗದ ಮೇಲೆ ಲೋಹದ ಉತ್ಸವಮೂರ್ತಿಯನ್ನಿಡಲಾಗಿದೆ. ದೇವಾಲಯದ ಭರಣಪಾತ್ರೆ ಮತ್ತು ಘಂಟೆಗಳ ಮೇಲೆ ಕೆಲವು ಶಾಸನಗಳಿವೆ. ಘಂಟೆಯ ಮೇಲಿನ ಶಾಸನವೊಂದರಿಂದ ಒಬ್ಬ ಮುಸಲ್ಮಾನ ತಹಶೀಲ್ದಾರ ಘಂಟೆಗಳನ್ನು ದೇವಾಲಯಕ್ಕೆ ಅರ್ಪಿಸಿದುದಾಗಿ ತಿಳಿದು ಬರುತ್ತದೆ.					  					 		   (ಬಿ.ಕೆ.ಜಿ.) 

	ಕನ್ನಡ ನಾಡಿನ ಪ್ರಸಿದ್ಧ ಮಹಿಮಾಕ್ಷೇತ್ರಗಳ ಪೈಕಿ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರ ಸ್ವಾಮಿಯ ದಿವ್ಯಸನ್ನಿಧಿ ಆಕರ್ಷಣೀಯವಾಗಿದೆ. ಅಲ್ಲಿಯ ಸಹಜ ಸುಂದರ ಪ್ರಾಕೃತಿಕ ಹಿನ್ನೆಲೆ, ನೂರಾರು ಸಾಲುಮರಗಳ ತೋಪು ದೇವಸ್ಥಾನದ ಇಡೀ ಪರಿಸರವನ್ನೇ ಹಸಿರುಗೊಳಿಸಿದೆ. ಹಿಂಬದಿಯಲ್ಲಿರುವ ಮಾರ್ಕೋನಹಳ್ಳಿಯ ಜಲಾಶಯದ ಕೆಂಪು ನೀರು ದನ, ಜನರಿಗೆ ತಂಪು ನೆಮ್ಮದಿಗಳನ್ನು ಒದಗಿಸುತ್ತದೆ. ಆಂತರಿಕವಾದ ಹಸಿವಿನಿಂದ ನೂರಾರು ಮೈಲಿಗಳಿಂದ ತಂಡ ತಂಡವಾಗಿ ಬರುವ ಜನರ ಆಂತರ್ಯದ ಅಭೀಪ್ಸೆಯನ್ನು ಸಿದ್ಧಲಿಂಗೇಶ್ವರನ ಚಿರ ತಪಸ್ಸಿನ ಮಹಿಮಾ ಸನ್ನಿಧಿ ಪೂರೈಸುತ್ತದೆ. ಆದ್ದರಿಂದಲೇ ಎಡೆಯೂರು ಆದಿಯಿಂದಲೂ ವೀರಶೈವರ ಧಾರ್ಮಿಕ ಕೇಂದ್ರವಾಗಿದ್ದರೂ ಜಾತಿಮತ ಪಂಥಗಳ ಭೇದವಿಲ್ಲದೆ ಎಲ್ಲ ಮತಗಳ ಭಕ್ತರೂ ಈ ಕ್ಷೇತ್ರಕ್ಕೆ ಪ್ರತಿನಿತ್ಯ ಬರುತ್ತಾರೆ.

	ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಕುಣಿಗಲಿನಿಂದ ಪಶ್ಚಿಮಕ್ಕೆ ಮೈಲಿ ದೂರದಲ್ಲಿ ರಸ್ತೆಯ ದಂಡೆಯಲ್ಲೇ ಇರುವ ಎಡೆಯೂರು ಶ್ರೀಕ್ಷೇತ್ರ ಉತ್ತಮ ಪ್ರವಾಸಿಕೇಂದ್ರವಾಗುವ ಎಲ್ಲ ಅನುಕೂಲತೆ ಆಕರ್ಷಣೆಗಳನ್ನು ಪಡೆದುಕೊಂಡಿದೆ. ಇಲ್ಲಿ ಈಚೆಗೆ ಚಿಕ್ಕದಾದ ಒಂದು ಪ್ರವಾಸಿಗಳ ಬಿಡಾರವನ್ನು ನಿರ್ಮಿಸಿದ್ದಾರೆ. ದೇವಸ್ಥಾನದ ಅಂದಚೆಂದಗಳು ಎದ್ದುಕಾಣುವಂತೆ ಇತ್ತೀಚೆಗೆ ಸುಣ್ಣಬಣ್ಣಗಳನ್ನು ತುಂಬಿಸಿದ್ದಾರೆ. ದೇವಾಲಯದ ಸುತ್ತಲೂ ನೈರ್ಮಲ್ಯ ಕಾಪಾಡಿಕೊಂಡು ಬಂದಿರುವುದೊಂದು ವೈಶಿಷ್ಟ್ಯವಾಗಿದೆ. ಪ್ರತಿವರ್ಷವೂ ಉಗಾದಿ ಆದ ಒಂದು ವರ್ಷಕ್ಕೆ ಸರಿಯಾಗಿ ಜರುಗುವ ವೈಭವಪೂರ್ಣ ರಥೋತ್ಸವ, ಜಾತ್ರೆಯ ಸಂದರ್ಭ ಸಾವಿರಾರು ಜನ ಭಕ್ತಾದಿಗಳು ಒಂದು ವಾರದವರೆಗೆ ಸೇರುತ್ತಾರಲ್ಲದೆ ನೂರಾರು ಜೊತೆ ಎತ್ತುಗಳ ಭಾರಿ ದನದ ಜಾತ್ರೆಯೂ ಸೇರುತ್ತದೆ.

	ಗೊಂಬೆ ತೇರು : ಎಡೆಯೂರಿನ ಅತ್ಯಂತ ವೈಭವಪೂರ್ಣ ಚಿತ್ರಮಯ ಗೊಂಬೆಯನ್ನು ನೋಡಿಯೇ ಆನಂದಿಸಬೇಕು. ಆರು ಭಾರಿ ಕಲ್ಲುಗಾಲಿಗಳಿರುವ ಆ ತೇರಿನಲ್ಲಿ ಅತ್ಯಂತ ಸೊಗಸಾಗಿ ಜೀವಂತವೆನಿಸುವಷ್ಟರಮಟ್ಟಿಗೆ ಮರದಲ್ಲಿ ಕೆತ್ತಲಾಗಿರುವ ನೂರಾರು ಚಿತ್ರಗಳು ಚಿತ್ತಾಕರ್ಷಕವಾಗಿವೆ. ವಿಶೇಷವಾಗಿ ನಾನಾಭಂಗಿಯ ಕಲೆಯ ಚಿತ್ರಗಳು ಎಂಥವರನ್ನೂ ಆಕರ್ಷಿಸುತ್ತವೆ. ಈ ತೇರಿನ ಬೃಹತ್ತು ಬಣ್ಣಗಾರಿಕೆ ದಿವ್ಯವಾಗಿವೆ. ಸಾವಿರಾರು ಮಂದಿ ಎತ್ತರದ ದನಿಯಲ್ಲಿ ಕೇಕೆಹಾಕುತ್ತ ಸಡಗರ ಉತ್ಸಾಹಗಳಿಂದ ತೇರನ್ನೆಳೆಯುತ್ತಾರೆ. ಶಿವರಾತ್ರಿ ಮತ್ತಿತರ ವಿಶೇಷ ದಿನಗಳಲ್ಲೂ ಅನೇಕ ಉತ್ಸವಗಳನ್ನು ನಡೆಸುವ ಏರ್ಪಾಡಿದೆ. ಮಂಡೆ ಕೊಡುವವರು, ದಿಂಡುರುಳು ಉರುಳುವವರು, ಗಂಧದ ಕೊರಡನ್ನೆತ್ತಿಕೊಂಡು ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡುವವರು - ಮುಂತಾದ ಭಕ್ತರನ್ನು ಪ್ರತಿದಿನವೂ ಕಾಣಬಹುದಾಗಿದೆ. 					 			 	 
     (ಎನ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ